top of page

ಸಾನಿಧ್ಯ ಪರಿಚಯ

    ಪ್ರಳಯಕಾಲದಲ್ಲಿ ಮಹಾಮಾರಿ ಆಗಿ ಕಾಣಿಸಿಕೊಳ್ಳುವ ಮಹಾಮಾತೆ ಸೃಷ್ಟಿಕಾಲದಲ್ಲಿ ತಾನೆ ಜಗತ್ತಾಗುತ್ತಾಳೆ. ಸ್ಥಿತಿ ಕಾಲದಲ್ಲಿ ಸಮಸ್ಯೆ ಜೀವರಾಶಿಗಳನ್ನು ಆ ಮಾತೃಶಕ್ತಿಯೇ ಮತ್ತೆ ಪೊರೆಯುತ್ತಾಳೆ.

    ಹಸಿರು ಕಾನನದ ಕವಚ ತೊಟ್ಟ, ಸಿಂಹ ಗಾಂಭೀರ್ಯ ಮಲಯ ಪರ್ವತದ ಬುಡದಲ್ಲಿ ಗುಲಗುಂಜಿ ಗಾತ್ರಕ್ಕಿರುವ ಹತ್ತಾರು ಊರುಗಳ ಗೊಂಚಲು ನಮ್ಮ ಕಾರ್ಕಳ ಸೀಮೆ, ಅನೇಕ ರಾಜವಂಶಗಳ ಆಳ್ವಿಕೆ ಕಂಡು  ಕಲಾಶ್ರೀಮಂತಿಕೆಗೆ ಮೇರು ಕಲಶವಾಗಿ ಪೊರೆದವಳು ಶಕ್ತಿದೇವತೆ ಶ್ರೀ ಮಾರಿಯಮ್ಮ.

 

    ರಾಜವಂಶಗಳು ಯುದ್ಧಕಾಲದಲ್ಲಿ ತಮ್ಮ ಸೇನೆಯ ರಕ್ಷಣೆಗೆ ನಾಡಿನ ಗಡಿ ರಕ್ಷಣೆಗೆ ಶಕ್ತಿ ದೇವತೆಯ ಆರಾಧನೆ ಮಾಡುತ್ತಿದ್ದರು. ದೈವಾರಾಧನೆಯನ್ನು ನೆಚ್ಚಿಕೊಂಡಿದ್ದ ತುಳುನಾಡಿಗೆ ಶಕ್ತಿದೇವತೆಯ ಪ್ರವೇಶವಾಗಿದ್ದು ವಿಜಯನಗರದ ಅರಸರ ಕಾಲದಲ್ಲಿ, ವಿಜಯನಗರ ಕಾಲದಲ್ಲಿ ತಿಗಳರು, ರಾಮಕ್ಷತ್ರಿಯರು, ರಣವೀರರು, ಮರಾಠರು ಹೀಗೆ ಅನೇಕ ಯೋಧ ಜನಾಂಗಗಳ ವಲಸೆ ಕಾರ್ಕಳಕ್ಕಾಯಿತು. ಶಕ್ತಿ ಆರಾಧಕರಾಗಿದ್ದ ರಾಮಕ್ಷತ್ರಿಯ ವಂಶದವರು ಮಾರಿಯಮ್ಮನ ಆರಾಧನೆಯನ್ನು ಆರಂಭಿಸಿದ ಐತಿಹ್ಯವಿದೆ. ಕೆಳದಿ ನೃಪವಿಜಯ ಬರೆದ ಲಿಂಗಣ್ಣ ಕವಿಯ ಉಲ್ಲೇಖದಂತೆ 1743 ರಲ್ಲಿ ಕಾಪು ಕಡಲ ದಂಡೆಯಲ್ಲಿ ಮನೋಹರ ಗಡ ಎಂಬ ಕೋಟೆ ರಚನೆಯಾಯಿತು. ಮಲ್ಲಾರು, ಬೈಲೂರು, ಕಾರ್ಕಳ ಮೊದಲಾದ ಕಡೆಗಳಲ್ಲಿ ಕೋಟೆ ಕಾಯಲು ದಂಡು ಮತ್ತು ದಂಡಿನ ತಲೆ ಕಾಯಲು ಒಂದು ಶಕ್ತಿದೇವತೆಯಾಗಿ ಮಾರಿ ಉಪಾಸನೆ ನಡೆದು ಬಂತು.


    ಕಾರ್ಕಳದ ಮಾರಿಗುಡಿಯ ಬಳಿಯಿರುವ ಕೋಟೆಯು ಭೈರವರಸರು, ಕೆಳದಿ ನಾಯಕರು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಕಂಡ ಕೋಟೆಯಾಗಿದೆ. ಉಗ್ರಾಣ, ಶಸ್ತ್ರಾಗಾರ ಮತ್ತು ಮದ್ದಿನ ಮನೆ ಈ ಕೋಟೆಯ ಒಳಭಾಗದಲ್ಲಿರುತ್ತಿತ್ತು. ಈ ಕೋಟೆ ಅನೇಕ ಯುದ್ಧಕ್ಕೆ ಸಾಕ್ಷಿಯಾಗಿದೆ. ನಾಡಿಗೆ ಒದಗಿದ ಎಲ್ಲಾ ಗಂಡಾಂತರಗಳಿಗೆ ಎದೆಯೊಡ್ಡುತ್ತಿದ್ದ ಬಿಚ್ಚುಗತ್ತಿಯ ಬಂಟರು ಕೋಟೆಯ ಶಕ್ತಿದೇವತೆ ಶ್ರೀ ಮಾರಿಯಮ್ಮನ ಉಪಾಸನೆ ಮಾಡಿ ರಕ್ತತರ್ಪಣ ನೀಡಿ ರಣರಂಗಕ್ಕೆ ಧುಮುಕುತ್ತಿದ್ದರು. ಹಿಂದೆ 8 ಮಾಗಣೆಯ ಜನರು ಸೇರಿ ಒಂದು ಮಾಗಣೆಗೆ 4ರಂತೆ ಒಟ್ಟು 32 ಕೋಣಗಳನ್ನು ಬಲಿ ನೀಡುತ್ತಿದ್ದರು. ಪರ್ವ ಆಚಾರದಂತೆ ಬಲಿಗೆ ಬಳಸುವ ಎಂಟು ಕತ್ತಿಗಳನ್ನು ಇಂದಿಗೂ ಕ್ಷೇತ್ರಕ್ಕೆ ತಂದು ಪೂಜಿಸಲಾಗುತ್ತದೆ. ಒಟ್ಟು 19 ಜಾತಿಯ ಜನರು ಸೇರಿ ಅಮ್ಮನ ಮಾರಿ ಪೂಜಾ ಮಹೋತ್ಸವವನ್ನು ಸಂಪ್ರದಾಯಬದ್ಧವಾಗಿ ಸಂಪನ್ನಗೊಳಿಸುತ್ತಾರೆ. 60ರ ದಶಕದಲ್ಲಿ ದೇಶಾದ್ಯಂತ ಪ್ರಾಣಿ ಬಲಿ ನಿಷೇಧವಾದ ಹಿನ್ನಲೆಯಲ್ಲಿ ಈಗ ಕ್ಷೇತ್ರದಲ್ಲಿ ಈ ಆಚರಣೆ ನಿಂತಿದೆ. ಬಲಿ ಪ್ರಧಾನವಾದ ಮಾರಿ ಆರಾಧನೆ ಸಾತ್ವಿಕ ರೂಪ ಪಡೆದಿದೆ. ಆದರೆ ಮಾರಿ ಆರಾಧನೆಯ ಮೂಲಸ್ವರೂಪವಾಗಿರುವ ಉಚ್ಚಂಗಿ ಅಮ್ಮನಿಗೆ ಇಂದಿಗೂ ಕುಲಾಚಾರ ಪದ್ಧತಿಯಲ್ಲಿ ಮಧ್ಯಮಾಂಸಾದಿಗಳಿಂದ ಸೇವೆ ನಡೆಯುತ್ತಾ ಬಂದಿದೆ.

 

   ಕಾಲದ ಪ್ರವಾಹಕ್ಕೆ ಸಿಲುಕಿ ರಾಜವಂಶಗಳು ಕಳೆದುಹೋದರೂ ಈ ಶಕ್ತಿ ದೇವತೆ ಮಾತ್ರ ಸ್ಥಿರವಾಗಿ ನಿಂತು ಭಕ್ತರ ಕಷ್ಟಕಳೆದು ಇಷ್ಟಾರ್ಥ ಸಿದ್ಧಿಸುತ್ತಿದ್ದಾಳೆ. ಹಿಂದೆ ಇಲ್ಲಿ ಮೊಳೆ ಇರುವ ಪಾದುಕೆಯನ್ನು ತೊಟ್ಟು ದರ್ಶನ ಸೇವೆ ನಡೆಯುತ್ತಿತ್ತು. ಶಿಷ್ಟ ಜನಪದ ಶೈಲಿಯ ಮಾರಿ ಆರಾಧನೆ ಇಂದಿಗೂ ಮೂಲ ಸ್ವರೂಪದಲ್ಲಿ ಉಳಿದುಕೊಂಡಿರುವುದು ವಿಶೇಷ.

 

   ಈ ಮೇಲಿನದ್ದು ಐತಿಹಾಸಿಕ ಉಲ್ಲೇಖವಾದರೆ, ಈ ಹಿಂದಿನಂತೆ ಪ್ರಸ್ತುತ ಈ ಕ್ಷೇತ್ರವನ್ನು ಅನುವಂಶಿಕ ರಾಮಕ್ಷತ್ರಿಯರು ಆಡಳಿತ ನಡೆಸಿಕೊಂಡು ಬರುತ್ತಿದ್ದು, ಕ್ಷೇತ್ರದಲ್ಲಿ ಶ್ರೀ ಮಾರಿಯಮ್ಮ ಪ್ರಧಾನ ದೇವರು, ಪರಿವಾರ ದೇವರಾದ ಕೋಟೆ ಶ್ರೀ ಮುಖ್ಯಪ್ರಾಣ ದೇವರು, ಶ್ರೀ ಉಚ್ಚಂಗಿ ಅಮ್ಮನವರು, ನಾಗದೇವರು ಹಾಗೂ ಕಲ್ಕುಡ, ವರ್ತೆ ತೂಕತ್ತೇರಿ ದೈವದೇವರುಗಳನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ

   ಪ್ರತಿ ಮಂಗಳವಾರ ನಡೆಯುವ ಗದ್ದುಗೆ ಪೂಜೆ ಹಾಗೂ ದರ್ಶನ ಸೇವೆ ವಿಶೇಷವಾದದ್ದು. ಊರಪರವೂರ ಭಕ್ತಾಭಿಮಾನಿಗಳು ಆಗಮಿಸಿ ಗದ್ದುಗೆ ಪೂಜೆಯ ಹರಕೆ ಸಲ್ಲಿಸುತ್ತಾರೆ ಹಾಗೂ ಶ್ರೀ ಮಾರಿಯಮ್ಮನ ದರ್ಶನದಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ, ಪ್ರತಿ ವರ್ಷ ಮೇ ತಿಂಗಳಲ್ಲಿ 19 ಜಾತಿಯ ಪಂಗಡದ ಜನರು ಸೇರಿ ಬಹಳ ವಿಜೃಂಭಣೆಯಿಂದ 2 ದಿನಗಳ ಕಾಲ ಮಾರಿಪೂಜೆಯನ್ನು ನಡೆಸಲಾಗುತ್ತದೆ. ಮೊದಲನೆಯ ದಿನ ಮೂರು ಮಾರ್ಗದಲ್ಲಿರುವ ದೇವರ ಪೀಠದಲ್ಲಿ ಶ್ರೀ ಮಾರಿಯಮ್ಮ ದೇವರ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮೂಲ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಎರಡನೇ ದಿನ ಸಣ್ಣ ಉತ್ಸವ ಮೂರ್ತಿಯನ್ನು ಮಾಡಿ ಶಿಷ್ಟ ಜನಪದ ಶೈಲಿಯ ಮೂಲಕ ದೇವಿಯನ್ನು ಆರಾಧಿಸಿ ಬೃಹತ್‌ ಮೆರವಣಿಗೆಯ ಮೂಲಕ ವಿಗ್ರಹವನ್ನು ಒಯ್ದು ರಾಮಸಮುದ್ರದ ಬಳಿ ಇರುವ ಮಾರಿಪಲ್ಕೆ ಎಂಬಲ್ಲಿ ವಿಸರ್ಜಿಸುವ ಆಚರಣೆ ನಡೆಸಲಾಗುತ್ತದೆ. ಆಕ್ಟೋಬರ್ ತಿಂಗಳಲ್ಲಿ 9 ದಿನಗಳ ಕಾಲ ನವರಾತ್ರಿ ಪೂಜೆಯನ್ನು ಆಚರಿಸಲಾಗುತ್ತದೆ. ಕೊನೆ ಮಂಗಳವಾರ 'ಚಂಡಿಕಾಹೋಮ' ವನ್ನು ನಡೆಸಲಾಗುತ್ತದೆ. ತದನಂತರ ಅಗ್ನಿ ಸೇವೆಯನ್ನು ನಡೆಸಲಾಗುತ್ತದೆ. ವಿಜಯದಶಮಿ ದಿನ ಆಯುಧಪೂಜೆಯನ್ನು ಮಾಡಿ, ಈ ಹಿಂದೆ ಕೋಣಗಳನ್ನು ಬಲಿಕೊಡಲು ಬಳಸುತ್ತಿದ್ದ ಕತ್ತಿಗಳನ್ನು ಪೂಜಿಸಿ ಬಾಳೆಗಿಡಗಳನ್ನು ಕಡಿಯುವುದರ ಮೂಲಕ ತರ್ಪಣ ಕೊಡಲಾಗುತ್ತದೆ.

  ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದ ಹಾಗೆ ಸದ್ರಿ ಕ್ಷೇತ್ರದ ದೇವಿಯು ಮಹಾಕಾಳಿಯ ರೂಪದ್ದಾಗಿದ್ದು, ಇದರ ಆರಾಧನೆಯಿಂದ ಶತ್ರುಪರಾಜಯ ಆಗುವುದಲ್ಲದೇ, ಲೋಕದಲ್ಲಿ ನೆಲೆಸಿರುವ ದುರಿತಗಳು ನಿವಾರಣೆಯಾಗಿ ಸುಭೀಕ್ಷೆ ನೆಲೆಸುವುದಾಗಿ ನಂಬಿಕೆಯಿದೆ.

 

  ಅನೇಕ ತಲೆಮಾರುಗಳ ಬಳಿಕ ಕಾರ್ಕಳದ ಪುರಜನರ ಪಾಲಿಗೆ ಮಹಾಮಾತೆಯ ಆಲಯ ನಿರ್ಮಾಣದ ಅತುಲ್ಯಯೋಗ ಲಭಿಸಿದೆ. ಮುತ್ತು, ರತ್ನ, ಹವಳ ಹಾರ ಧರಿಸಿ ಸಂಪಿಗೆ ವರ್ಣದ ಮೈಕಾಂತಿಯಿಂದ ಶೋಭಿಸುತ್ತಾ ಭದ್ರಾಸನದಲ್ಲಿ ಕುಳಿತು ರಾಜಸ ಪ್ರಭೆಯಲ್ಲಿ ಸಮಷ್ಟಿಯನ್ನು ಸಂರಕ್ಷಿಸುತ್ತಾ ಬಂದಿರುವ ಮಹಾಮಾತೆ ಶ್ರೀ ಮಾರಿಯಮ್ಮ ದೇವರು ಜಗತ್ತಿಗೆ ಸಕಲ ಸನ್ಮಂಗಲವನ್ನುಂಟು ಮಾಡಲಿ ಎಂಬುದು ನಮ್ಮ ಸದಾಶಯವಾಗಿದೆ.

ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನ

ವಿಳಾಸ:        ಶ್ರೀ ಮಾರಿಯಮ್ಮ ದೇವಸ್ಥಾನ

                  ಕಾರ್ಕಳ ಬಸ್ ನಿಲ್ದಾಣದ ಬಳಿ

                  ಕಾರ್ಕಳ-574104

E-mail:       karkalashreemaariyamma@gmail.com

ಸಂಪರ್ಕ:      9845095526 / 9008028088 / 9844741453                    

Designed and Developed by :
bottom of page